ಮ್ಯಾಗ್ಲಮೋಸಿಯನ್
 	ಕ್ರಿ. ಪೂ. 4800 ರಿಂದ 5000 ದ ನಡುವಣ ಕಾಲದಲ್ಲಿ ಉತ್ತರ ಯೂರೋಪಿನ ಬಯಲು ಪ್ರದೇಶದಲ್ಲಿ ಹರಡಿದ್ದ ಮಧ್ಯಶಿಲಾಯುಗದ ಮೆಸೊಲಿಥಿಕ್ ಸಂಸ್ಕøತಿ, ಸಮುದ್ರಮಟ್ಟದಿಂದ 150-200 ಮೀಟರ್ ಎತ್ತರದಲ್ಲಿ ಕೆಲವೊಮ್ಮೆ ತಗ್ಗಾದ ಜವುಗು ಪ್ರದೇಶದಲ್ಲಿ, ನದಿ ಸರೋವರಗಳ ನೆಲೆಗಳು ಕಂಡುಬಂದಿವೆ. ಮಲರಪ್. ಸ್ವೇಬರ್ಗ್ ಹಾಗೂ ಹೋಮ್‍ಗಾರ್ಡ್ ಮುಂತಾದ ಝೀಲ್ಯಾಂಡಿನ ನೆಲೆಗಳಿರುವುದು ಜವುಗು ಪ್ರದೇಶದಲ್ಲಿಯೇ. ಜರ್ಮನಿಯ ಡ್ಯುವೆನ್‍ಸೇಯಥ ಅನೇಕ ನೆಲೆಗಳಲ್ಲಿ ಕೇವಲ ಬೇಸಗೆ ಕಾಲದಲ್ಲಿ ಮಾತ್ರ ಮಾನವ ವಾಸಿಸುತ್ತಿದ್ದ. ಈ ಯುಗದಲ್ಲಿ ಬ್ರಿಟನ್ನಿನ ತಗ್ಗುಪ್ರದೇಶದಿಂದ ಪೂರ್ವದಲ್ಲಿ ಪೋಲೆಂಡ್-ರಷ್ಯದವರೆಗೆ, ಉತ್ತರದಲ್ಲಿ ದಕ್ಷಿಣ ಸ್ವೀಡನ್ನಿನವರೆಗೆ ಇಡೀ ಪ್ರದೇಶ ಎಲ್ಲಿಯೂ ಬೆಟ್ಟ, ನೀರುಗಳಿಂದ ಬೇರ್ಪಡದೆ ಅಖಂಡ ಮಟ್ಟಸ ನೆಲವಾಗಿದ್ದು ದಟ್ಟವಾದ ಕಾಡಿನಿಂದ ಕೂಡಿದ್ದಿರಬೇಕು. ಪ್ರಾಯಶಃ ಈ ಪ್ರದೇಶದ ಮಧ್ಯಬಾಗದಲ್ಲಿ ಡೆನ್ಮಾರ್ಕ್, ದಕಿಷಣ ಸ್ವೀಡನ್ ಮತ್ತು ವಿಶೇಷವಾಗಿ ಝೀಲ್ಯಾಂಡ್ ದ್ವೀಪದಲ್ಲಿ ಮ್ಯಾಗ ಮೋಸ್ ಜನಸಾಂದ್ರತೆ ದಟ್ಟವಾಗಿತ್ತು ಎನ್ನಬಹುದು. ನಾರ್ತ್‍ಸೀಯಲ್ಲಿ ದೊರಕಿದ ಉಪಕರಣಗಳು ಇದನ್ನು ಪುಷ್ಟೀಕರಿಸುತ್ತವೆ. ಪೋಲೆಂಡ್, ಎಸ್ಟೋನಿಯ, ಬೆಲ್ಜಿಯಮ್, ಪೀಕರ್ಡಿ ಹಾಗೂ ಆಗ್ನೇಯ ಬ್ರಿಟನ್‍ಗಳಲ್ಲಿ ಚದರಿದಂತೆ ಅಲ್ಲಲ್ಲಿ ಕೆಲವು ಬೆಲೆಗಳು ಮತ್ತು ಉಪಕರಣಗಳು ಕಂಡಬಂದಿವೆ. ಝೀಲ್ಯಾಂಡಿನ ನೆಲೆಗಳಲ್ಲಿದೆ ಇತರ ಪ್ರಮುಖ ನೆಲೆಗಳೆಂದರೆ ಇಂಗ್ಲೆಂಡಿನ ಬ್ರಾಕ್ಸ್‍ಬರ್ನ್, ಕೆಲಿಂಗ್ ಹೇತ್, ನ್ಯೂಬರೀ, ಥ್ಯಾಚಮ್, ಸ್ಕಿಪ್‍ಸೀ, ಎಷ್ಟೋನಿಯದ ಕುಂದ, ಜರ್ಮನಿಯ ಕಾಲ್ಟ, ಡಾಬರ್ಟಿನ್, ಡ್ಯುವೆನ್‍ಸೇ ಹಾಗೂ ಸ್ವೀಡನ್ನಿನ ಇಸ್ತಬಿ, ಏಮಸೆನ್, ಸಂಡಾರ್ನ, ಸ್ಟುರ್‍ಡೋಡ್‍ಮೋಸ್, ಬೇರ್‍ಮೋಸ್ ಮತ್ತು ಹಾರ್ನಿಂಜ್‍ಮೋಸ್.

ಮ್ಯಾಗ್ಲಮೋಸಿಯನ್ ಜನಜೀವನ ಮೀನುಗಾರಿಕೆ, ಹಕ್ಕಿಹಿಡಿಯುವುದು ಹಾಗೂ ಬೇಟೆಗಳನ್ನು ಆಧರಿಸಿತ್ತು. ಇವರ ನೆಲೆಗಳಲ್ಲಿ ಪೈಕ್ ಮೀನು, ನೀರ ಹಕ್ಕಿ ಹಾಗೂ ಕಾಡು ಪ್ರಾಣಿಗಳು-ವಿಶೇಷವಾಗಿ ಕಡೆತ್ತು ಮತ್ತು ಎಲ್ಕ್ ಹೇರಳವಾಗಿದ್ದವು. ಡಯುವೆನ್‍ಸೇ ಮತ್ತು ಹೋಮ್‍ಗಾರ್ಡ್ ನೆಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೇಸಲ್ ಬೀಜಗಳು ಕಂಡಬಂದಿವೆ. ಸುಟ್ಟ ಧಾನ್ಯವಾಗಲೀ ಕುಡುಗೋಲುಕಲ್ಲುಗಳಾಗಲೀ ಕಂಡುಬಂದಿಲ್ಲ. ಈ ಕಾರಣ ಮ್ಯಾಗ್ಲಮೋಸ್ ಜನರು ಕೃಷಿಕರಾಗಿರಲಿಲ್ಲವೆನ್ನಬಹುದು. ಇವರ ಸಾಕು ಪ್ರಾಣಿ ನಾಯಿ ಮಾತ್ರವೇ. ಮಡಕೆ ಕುಡಿಕೆಗಳ ತಯಾರಿಕೆ ಇವರಿಗಿನ್ನೂ ತಿಳಿದಿರಲಿಲ್ಲ. ದೊಡ್ಡ ಸಮುದಾಯಗಳಿಗೆ ಆಧಾರವಾಗುವಂಥ ಸಮಾಜ ವ್ಯವಸ್ಥೆ ಇವರದಲ್ಲವಾದ್ದರಿಂದ ಮ್ಯಾಗ್ಲಮೋಸ್ ಜನರು ಸಣ್ಣಪುಟ್ಟ ಗುಂಪುಗಳಲ್ಲಿ ವಾಸಿಸುತ್ತಿದ್ದರು. ವರ್ಷವರ್ಷವೂ ಇವರು ವಲಸೆ ಹೋಗುತ್ತಿದ್ದರೆಂದು ಕಾಣುತ್ತದೆ. ಏಕೆಂದರೆ ಇವರ ನೆಲೆಗಳಿಂದ ಬೇಸಗೆ ಮತ್ತು ಮಾಗಿಕಾಲಗಳಲ್ಲಿ ಮಾತ್ರ ಜನವಸತಿ ಇದ್ದ ವಿಷಯ ತಿಳಿದುಬಂದಿದೆ. ಈ ಕಾಲದ ಯಾವುದೇ ಹೂಳುಗಾಡು ಪತ್ತೆಯಾಗಿಲ್ಲ. ಆದರೆ ಜನ ವಸತಿಯ ಮುರುಕಲು ಗುಪ್ಪೆಗಳಲ್ಲಿ ಚದರಿ ಬಿದ್ದಿರುವ ಮಾನವ ಮೂಳೆಗಳ ಉಪಸ್ಥಿತಿ ನರಭಕ್ಷಣೆಯ ಸಾಧ್ಯತೆಯನ್ನು ಸೂಚಿಸುತ್ತದೆ.
ಕಾಡು ಮತ್ತು ನೀರಿನ ಪರಿಸರಕ್ಕೆ ಅನುಗುಣವಾಗಿ ಈ ಜನರ ಆಯುಧ ಉಪಕರಣಗಳು ರೂಪುಗೊಂಡಿದ್ದವು. ತಗ್ಗುಪ್ರದೇಶದ ನೆಲೆಗಳಲ್ಲಿ ಬೇಗ ನಾಶವಾಗುವ ಪದಾರ್ಥಗಳಾದ ಮರ, ಮೂಳೆ ಹಾಗೂ ಜಿಂಕೆಯ ಕೊಂಬಿನ ವಸ್ತುಗಳು ತೇವಸ್ಥಿತಿಯಲ್ಲಿ ಕಂಡಬಂದವು. ಹೋಮ್‍ಕಾರ್ಡಿನಲ್ಲಿ ಮೊನಚಾದ, ಬೆಂಕಿಯಲ್ಲಿ ಗಟ್ಟಿಮಾಡಿದ ಮರದ ಚತುಶ್ಶೂಲ, ಮರದ ಫಲಕ ಹಾಗೂ ವಿಲೋಮರದಿಂದ ಮಾಡಿದ ದೋಣಿ ಹುಟ್ಟು ದೊರಕಿದವು. ಡ್ಯುವೆನ್‍ಸೇಯಲ್ಲೂ ಈ ಬಗೆಯದೇ ಹುಟ್ಟೊಂದು ಸಿಕ್ಕಿತು. ಸ್ಕಾಟ್‍ಲೆಂಡಿನ ಫತ ಎಂಬಲ್ಲಿ ಅಳಿವೆಯ ಹೂಳಿನ ಸುಮಾರು 3 ಕಿ.ಮೀ. ಕೆಳಗಡೆ ಫರ್ ಮರದ ಪೈನ್ ಮರದ ತೊಗಟೆ ಗೋಚರಿಸಿದವು. ಫಿನ್ಲೆಂಡಿನಲ್ಲಿ ಮುಳುಗುಕಲ್ಲು ಮತ್ತು ಪೈನ್ ಮರದ ತೊಗಟೆಯಿಂದ ಮಾಡಿದ ಈಜಿಬುರುಡೆಗಳ ಸಹಿತ, ಸಸ್ಯದ ನಾರಿನಿಂದ ನೇಯ್ದ ಮೀನ ಬಲೆಯೊಂದು ಲಭಿಸಿತು. ಫ್ಲಿಂಟ್ ಕಲ್ಲಿನ ಕೊಡಲಿ ಬಾಚಿಗಳ ಮತ್ತು ಹರಿತವಾದ ಅಲುಗುಳ್ಳ ನೀಳ ಚಕ್ಕೆಗಳ ಹಿಡಿಕೆಗೆ ಜೆಂಕೆಯ ಕೊಂಬನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಕೆಲವಾರು ಕೊಂಬಿನ ಚೂರುಗಳ ಮೇಲೆ ಜ್ಯಾಮಿತಿಯ ವಿನ್ಯಾಸಗಳನ್ನು ಬಿಡಿಸಿದೆ. ಮೂಳೆಗಳಿಂದ ದಬ್ಬಳ ಸೂಜಿಗಳಂಥವನ್ನು ತಯಾರಿಸಲಾಗುತ್ತಿತ್ತು. ಕವಲಿಲ್ಲದೆ ಮೂಳೆಯ ಗಾಳಗಳು ಸರ್ವಸಾಮಾನ್ಯವಾಗಿದ್ದವು. ಮ್ಯಾಗ್ಲಮೋಸ್ ಸಂಸ್ಕøತಿಯ ಅತಿ ವಿಶಿಷ್ಟ ಉಪಕರಣವೆಂದರೆ ಮೂಳೆಯ ಅಥವಾ ಕೊಂಬಿನ ಮೊನೆ. ಹಲ್ಲುಳ್ಳ ಮೊನೆಯ ನಡುವೆ ಫ್ಲೀಟ್ ಕಲ್ಲಿನ ಚೂರುಗಳನ್ನು ಜೋಡಿಸಿ ಬಳಸಲಾಗುತ್ತಿತ್ತು. ಇವನ್ನು ಹಾರ್ಪೂನುಗಳೆಂದುಕರೆಯಲಾಗಿದೆ. ಇವುಗಳಲ್ಲಿ ಹೆಚ್ಚಿನವನ್ನು ಮರದ ಹಿಡಿಕೆ ಅಥವಾ ದಂಡ ಸೇರಿಸಿ ಮೀನು ಹಿಡಿಯುವ ತ್ರಿಶೂಲ ಅಥವಾ ಬಹುಶೂಲದ ಭರ್ಜಿಗಳಾಗಿ ಅಥವ ಹಕ್ಕಿ ಹೊಡೆಯುವ ಉಪಕರಣಗಳಾಗಿ ಉಪಯೋಗಿಸಲಾಗುತ್ತಿತ್ತು; ಮರದ ಹಿಡಿಕೆ ಸೇರಿಸಿ ಭಲ್ಲೆಯಂತೆ ಬಳಸುತ್ತಿದ್ದುದೂ ಉಂಟು.

ಮ್ಯಾಗ್ಲಮೋಸ್ ಜನರು ಫ್ಲಿಂಟ್ ಕಲ್ಲಿನ ಉಪಕರಣಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಇವರ ನೆಲೆಗಳ ಪ್ರಮುಖ ಲಕ್ಷಣಗಳಲ್ಲೊಂದು ಎಂದರೆ ಕಿರು ಶಿಲಾಯುಧಗಳು. ಕೆಲವು ತ್ರಿಕೋನ, ಬಾಲಚಂದ್ರ ಮತ್ತು ವಿಷಮ ಚತುರಸ್ರ ಆಕಾರದ ಆಯುಧಗಳು ಕಂಡುಬಂದಿವೆ. ಆದರೆ ಹೆಚ್ಚು ಕಾಣಸಿಗುವ ಉಪಕರಣಗಳೆಂದರೆ ಹರಿತವಾದ, ಕಿರಿದಾದ ಚಕ್ಕೆ ಮತ್ತು ಚಕ್ಕೆಗಳನ್ನು ಎಬ್ಬಿಸಿದ ಕುರಿಹುಗಳನ್ನುತೋರುವ ಮೂಲಶಿಲೆ, ಕಿರುಕೊರೆಯುಳಿ ಮತ್ತು ಹೆರೆಯುವ ಸಾಧನಗಳು ಸಹ ಲಭಿಸಿವೆ. ಭಾರದ ಉಪಕರಣಗಳು ಈ ಸಂಸ್ಕøತಿಯ ಇನ್ನೊಂದು ವಿಶಿಷ್ಟ ಲಕ್ಷಣ. ಮರದ ಅಥವಾ ಕೊಂಬಿನ ಕೊಳವೆಗಳ ತುದಿಗಳಿಗೆ ಸಿಕ್ಕಿಸಿದ. ಫ್ಲಿಂಟ್ ಕಲ್ಲಿನಿಂದ ಮಾಡಿದ, ಕೊಡಲಿ, ಬಾಚಿ, ಹಾಗೂ ಮೂಲಶಿಲೆಯ ಉಳಿ (ಕೋರ್ ಚಿಸೆಲ್) ಮರದ ಹಿಡಿದೆ ಸಹಿತವಾದ ಚಕ್ಕೆಯ ಕೊಡಲಿಗಳು ದೊರೆತಿವೆ. ಉರುಟುಕಲ್ಲಿನ ಸುತ್ತಿಗೆ, ಕೊಡಲಿ, ತೂತುಗಳುಳ್ಳ ಬಾಚಿ ಹಾಗೂ ಈಟಿಯ ಮೊನೆಗಳಿಗೆ ಕಲ್ಲನ್ನು ಬಳಸಿದೆ.

ಮ್ಯಾಗ್ಲ ಮೋಸ್ ಸಂಸ್ಕøತಿಯ ಕಲೆ ಪ್ರಧಾನವಾಗಿ ಕಂಡುಬರುವುದು ಸಣ್ಣ ವಸ್ತುಗಳ ಮೇಲೆ; ಸಾಮಾನ್ಯವಾಗಿ ದಿನಬಳಕೆಯ ಉಪಕರಣಗಳಾದ ಕೊಂಬಿನ ಹಿಡಿಕೆ, ಕೊಡಲಿ, ಬಾಚಿ, ಮೊಳೆಯ ಮೊನೆ ಮತ್ತು ಹೊಳಪು ನೀಡಿದ ಕೊಂಬಿನ ಚೂರುಗಳ ಮೇಲೆ, ಅಂಬರ್‍ಲೋಲಕಗಳ ಮೇಲಿನ ಕೆತ್ತನೆಯ ವಿರಳ ನಿದರ್ಶನಗಳೂ ಉಂಟು.

ಇಡೀ ಉತ್ತರ ಯೂರೋಪಿನ ಬಯಲು ಪ್ರದೇಶದಲ್ಲೆಲ್ಲ ಮ್ಯಾಗ್ಲ ಮೋಸ್ ಸಂಸ್ಕøತಿ ಏಕರೂಪದ್ದು. ಉಪಕರಣಗಳ ತಯಾರಿಕೆ ಮತ್ತು ಕಲೆಯಲ್ಲಿ ಯಾವುದೇ ವೈವಿಧ್ಯ ಕಂಡುಬರುವುದಿಲ್ಲ. ನಾರ್ತ್‍ಸೀಯಿಂದ ಬಲುಮಟ್ಟಿಗೆ ಪ್ರತ್ಯೇಕಗೊಂಡಿದ್ದ ಬ್ರಿಟನ್ನಿನಲ್ಲಿ ಈ ಕಾಲದ ಕೊನೆಯ ಹೊತ್ತಿಗೆ ಕೆಲವು ವ್ಯತ್ಯಾಸಗಳು ಕಾಣಬರುತ್ತವೆ. ಸ್ಟಾರ್‍ಕಾರ್ ಎಂಬ ನೆಲೆ ಮ್ಯಾಗ್ಲಮೋಸ್ ಸಂಸ್ಕøತಿಯ ಪ್ರಾಚೀನತಮ ಹಂತವನ್ನು ಪ್ರತಿನಿಧಿಸುತ್ತದೆ.

ಮ್ಯಾಗ್ಲಮೋಸ್ ಸಂಸ್ಕøತಿಯ ಕೆಲವು ಅಂಶಗಳನ್ನು ಅಂತ್ಯ ಪ್ರಾಚೀನ ಶಿಲಾಯುಗದಷ್ಟು ಹಿಂದೆಯೇ ಗುರುತಿಸಲಾಗಿದೆ. ಗಾಳಕೊಕ್ಕೆ, ಗಾಳದ ಹುರಿ ಹಾಗೂ ಬಲೆಗಳು ಮ್ಯಾಗ್ಲಮೋಸ್ ಮಾನವನ ಇರುನೆಲೆಯ ಪರಿಸರದಿಂದಾಗಿ ರೂಪುಗೊಂಡವು. ಕೊನೆಯ ಹಿಮಾವರ್ತದ ಅಂತ್ಯದ ವೇಳೆಗೆ ಹಿಮನದಿಗಳು ಹಿಂದೆಸರಿದು, ಭೂಭಾಗ ಮೇಲಿದ್ದುದರಿಂದ ಮ್ಯಾಗ್ಲಮೋಸ್‍ನ ಸಮುದಾಯ ಸ್ಕ್ಯಾಂಡಿನೇವಿಯ ಪರ್ಯಾಯದ್ವೀಪ ಮಧ್ಯಭಾಗಕ್ಕೆ ಸರಿಯಬೇಕಾಯಿತು. ಅದರ ಮ್ಯಾಗ್ಲಮೋಸ್ ಸಂಸ್ಕøತಿ ನಿರ್ನಾಮವಾಗಲಿಲ್ಲ; ಹೊಸ ಸಂಸ್ಕøತಿಗಳ ಸುಪ್ತಸ್ತರವಾಗಿ ರೂಪುಗೊಂಡು ಕೆಲವು ಪ್ರದೇಶಗಳಲ್ಲಿ ಮುಂದುವರಿಯಿತು.
						     (ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ